ಕೆಲವು ವಸ್ತು ಅಥವಾ ವಿಷಯಗಳನ್ನು ನೋಡುವುದರಿಂದ, ಕೇಳುವುದರಿಂದ, ಓದುವುದರಿಂದ ಅಪಕ್ವ ಮತ್ತು ಅಪ್ರಬುದ್ಧ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಿ ಅನೀತಿಗೆ ಪ್ರಚೋದನೆಯುಂಟಾಗುತ್ತದೋ ಅಂಥ ವಸ್ತು ಅಥವಾ ವಿಷಯ ಅಶ್ಲೀಲ ಎನ್ನಿಸಿಕೊಳ್ಳುತ್ತದೆ.  ಅಶ್ಲೀಲವಾದುದನ್ನು ಬರೆಯುವುದು, ಪ್ರಕಟಿಸುವುದು, ಪ್ರದರ್ಶಿಸುವುದು ಶಿಕ್ಷಾರ್ಹವೆಂದು ಪ್ರಪಂಚದ ಎಲ್ಲ ದೇಶಗಳೂ ಶಾಸನ ಮಾಡಿವೆಯಾದರೂ ಯಾವ ದೇಶದ ಶಾಸನದಲ್ಲೂ ಅಶ್ಲೀಲ ಎಂದರೆ ಏನೆಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ಕೊಟ್ಟ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಅಶ್ಲೀಲ ಎಂಬ ಪದದ ಅರ್ಥವನ್ನು ಗ್ರಹಿಸಬಹುದು. ಹಾಗೆಯೇ ನ್ಯಾಯಾಲಯಗಳು ಕೊಟ್ಟ ತೀರ್ಪುಗಳನ್ನು ಅವಲೋಕಿಸಿದರೆ ಅಶ್ಲೀಲ ಎಂಬುದು ಲೈಂಗಿಕ ವಿಚಾರಗಳಿಗೇ ಬಹುಮಟ್ಟಿಗೆ ಸಂಬಂಧಿಸಿರುವುದಾಗಿ ತೋರುತ್ತದೆ. ಕಾಮಪ್ರಚೋದನೆ ಮಾಡುವಂಥ ವಸ್ತು ಅಥವಾ ಸಂಗತಿಗಳಿಗೆ ಬಹುತೇಕ ಅಶ್ಲೀಲ ಎಂಬುದು ಈಗ ಪರಿಮಿತವಾಗಿರುವಂತೆ ಕಾಣುತ್ತದೆ. ಪರಿಣಾಮವಾಗಿ ಅಮೆರಿಕದ ಸಂಯುಕ್ತಸಂಸ್ಥಾನದ ಜಾರ್ಜಿಯ ನ್ಯೂಹ್ಯಾಂಪ್ಷೈರ್, ನ್ಯೂಮೆಕ್ಸಿಕೊ ಮತ್ತು ಉತ್ತರ ಕೆರೋಲಿನ-ಈ ನಾಲ್ಕು ರಾಜ್ಯಗಳ ಹೊರತಾಗಿ ಎಲ್ಲ ರಾಜ್ಯ ಸರ್ಕಾರಗಳೂ ಸಂಯುಕ್ತಸಂಸ್ಥಾನದ ಫೆಡರಲ್ ಸರ್ಕಾರವೂ ಸಂತಾನನಿರೋಧಪದ್ಧತಿಗಳನ್ನು ಪ್ರಚುರಪಡಿಸುವುದನ್ನು ಶಾಸನ ಬಾಹಿರವನ್ನಾಗಿ ಮಾಡಿವೆ.

ಒಂದು ವಸ್ತು ಅಥವಾ ವಿಷಯ ಅಶ್ಲೀಲವೇ ಅಲ್ಲವೆ ಎಂಬುದನ್ನು ನಿರ್ಧರಿಸುವಾಗ ಅದು ಯಾರ ಗಮನಕ್ಕೆ ಬರುತ್ತದೆಯೋ ಅವರ ವಯಸ್ಸು, ಮನಸ್ಸು , ಸ್ಥಳ, ಆಚಾರ ವಿಚಾರ, ಜೀವನಪದ್ಧತಿ-ಇವೆಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಚುಂಬಿಸುವ ಪದ್ಧತಿ ಭಾರತದಲ್ಲಿಲ್ಲ. ಹಾಗೆ ಮಾಡಿದರೆ ಅದು ಅಸಭ್ಯತೆ ಎಂದು ಪರಿಗಣಿಸಿದ್ದಾರೆ. ಒಮ್ಮೊಮ್ಮೆ ಅದು ಅಶ್ಲೀಲದ ಮಟ್ಟಕ್ಕೂ ಹೋಗಬಹುದು. ಚುಂಬಿಸುವಾಗ ನಿಂತ ಭಂಗಿ, ಸ್ಥಳ, ಕಾಲ, ರೀತಿ, ಅಂಗಪ್ರದರ್ಶನ-ಇವೆಲ್ಲವೂ ಸೇರಿ ಅಶ್ಲೀಲ ಎಂದು ಎನ್ನಿಸಿಕೊಳ್ಳಬಹುದು, ಭಾರತೀಯರ ದೃಷ್ಟಿಯಲ್ಲಿ. ಆದರೆ ಪಾಶ್ಚಾತ್ಯದೇಶ ಗಳಲ್ಲಿ ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸುವುದು ಸರ್ವಸಾಧಾರಣ ಪದ್ಧತಿಯಾಗಿದೆ. ಹಾಗೆಯೇ ವಯೋಧರ್ಮಕ್ಕನುಗುಣವಾಗಿ ಒಂದು ವಸ್ತು ಅಥವಾ ವಿಷಯ ಅಶ್ಲೀಲವಾಗಬಹುದು, ಆಗದಿರಲೂಬಹುದು. ಯುವಕರಿಗಾಗಲಿ, ಮುದುಕರಿಗಾಗಲಿ ಯಾವ ವಸ್ತು ಅಥವಾ ವಿಷಯಗಳನ್ನು ಓದುವುದರಿಂದ, ನೋಡುವುದರಿಂದ, ಕೇಳುವುದರಿಂದ ಕಾಮ ಪ್ರಚೋದನೆ ಉಂಟಾಗುತ್ತದೋ, ಹೊಲಸು ಭಾವನೆಗಳು ಉಂಟಾಗುತ್ತವೋ ಅಂಥವು ಅಶ್ಲೀಲ ಎನ್ನಿಸುತ್ತವೆ.

ಆದರೆ ಶಾಸನ ಕೆಲವು ಅಪವಾದಗಳನ್ನು ಒಪ್ಪುತ್ತದೆ. ಪ್ರಾಚೀನ ಕಾವ್ಯ, ವಾಸ್ತುಶಿಲ್ಪ, ಚಿತ್ರಕಲೆ ಹಾಗೂ ಕಲಾಕೃತಿ ಎಂಬ ಹೆಸರಿಗೆ ಅರ್ಹವಾದ ಎಲ್ಲ ಚಿತ್ರ, ಶಿಲ್ಪ, ಬರೆವಣಿಗೆಗಳು ಎಷ್ಟೇ ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ್ದರೂ ಅವನ್ನು ಅಶ್ಲೀಲ ಎನ್ನಲಾಗದು. ನಮ್ಮ ಪ್ರಾಚೀನಕವಿಗಳು ತಮ್ಮ ಕಾವ್ಯಗಳಲ್ಲಿ ವರ್ಣಿಸಿರುವ ಶೃಂಗಾರ ಕಲಾಕೃತಿ ಎಂಬ ಕಾರಣದಿಂದ ಅಶ್ಲೀಲ ಅಲ್ಲ. ಹಾಗೆಯೇ ಕೆಲವು ದೇವತಾವಿಗ್ರಹಗಳು, ಮೂರ್ತಿಗಳು, ಚಿತ್ರಗಳು ಹೇಗಿದ್ದರೂ ಅಶ್ಲೀಲ ಎನಿಸುವುದಿಲ್ಲ. ಗೋಮಟೇಶ್ವರ ವಿಗ್ರಹ, ಬೇಲೂರಿನ ಶಿಲಾಬಾಲಿಕೆಯರು, ಶ್ರೀಕೃಷ್ಣಗೋಪಿಯರ ರಾಸಕೇಳಿಯ ಚಿತ್ರಗಳು ಮುಂತಾದವನ್ನು ಅಶ್ಲೀಲ ಎಂದು ಭಾವಿಸಲಾ ಗಿಲ್ಲ. ಹಾಗೆಯೇ ಕೇವಲ ಲೈಂಗಿಕವಿಚಾರಗಳಿಗೆ ಮೀಸಲಾದ ಶಾಸ್ತ್ರೀಯ ಗ್ರಂಥಗಳು, ಸ್ತ್ರೀ ಪುರುಷರ ಜನನೇಂದ್ರಿಯಗಳನ್ನು ಬಿಡಿ ಬಿಡಿಯಾಗಿ ವಿವರ ವಿವರವಾಗಿ ಬರೆದು, ಚಿತ್ರಿಸಿ, ಪ್ರಕಟಿಸಿ, ಸಾರಿ ಹೇಳಿದರೆ ಅದು ಅಶ್ಲೀಲ ಎನ್ನಿಸುವುದಿಲ್ಲ. ಸುಖಮಯ ದಾಂಪತ್ಯ ಜೀವನಕ್ಕೆ ಬೇಕಾದ ವೈಜ್ಞಾನಿಕ ತಿಳಿವಳಿಕೆಯನ್ನು ಕೊಡುವ ಯಾವ ಬರೆವಣಿಗೆಯೇ ಆಗಲಿ ಅದೆಷ್ಟೇ ಬಿಚ್ಚು ಮಾತಿನಲ್ಲಿ ಬರೆದದ್ದಾದರೂ ಅಶ್ಲೀಲ ಎನ್ನಿಸುವುದಿಲ್ಲ. ಅಶ್ಲೀಲ ಆಗಿದೆಯೇ ಇಲ್ಲವೇ ಎಂಬುದಕ್ಕೆ ಒಂದು ಪರೀಕ್ಷೆಯೆಂದರೆ ಅದು ಅಪವಿತ್ರ ಅಯೋಗ್ಯ, ಅನಾರೋಗ್ಯಕರವಾದ ಕಾಮಪ್ರಚೋದನೆಯನ್ನುಂಟುಮಾಡುತ್ತದೆಯೇ ಇಲ್ಲವೇ ಎಂಬುದೇ ಆಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ